ಯುಮುನಾ ಶ್ರೀನಿಧಿ… ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಅಭಿನಯ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಯಮುನಾ ಶ್ರಿನಿಧಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕ ಚರಣ್ ಅಮ್ಮ ಧನಲಕ್ಷ್ಮಿ ಆಗಿ ಅಭಿನಯಿಸುತ್ತಿದ್ದಾರೆ.

ಯಾವುದೇ ಪಾತ್ರವಾದರೂ ಸರಿ, ಮನೋಜ್ಞ ವಾಗಿ ನಟಿಸುವ ಯಮುನಾ ಶ್ರಿನಿಧಿ ಸದ್ಯ ಧನಲಕ್ಷ್ಮಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಕನ್ಯಾಕುಮಾರಿ ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಮುನಾ ಶ್ರೀನಿಧಿ “ನಾವು ನಿರ್ವಹಿಸುವ ಪಾತ್ರಕ್ಕೆ ವೀಕ್ಷಕರು ತಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ನೀಡಿದಾಗ ಅದು ನಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. “ಕನ್ಯಾಕುಮಾರಿ” ಧಾರಾವಾಹಿಯಲ್ಲಿ ನನ್ನ ಧನಲಕ್ಷ್ಮಿ ಪಾತ್ರವನ್ನು ಬೆಂಬಲಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

“ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿರುವ ಧನಲಕ್ಷ್ಮಿ ಇಡೀ ಮನೆಯ ಜವಬ್ದಾರಿ ವಹಿಸಿಕೊಳ್ಳುತ್ತಿರುತ್ತಾಳೆ. ಧನಲಕ್ಷ್ಮಿ ಗೆ ಅವಳ ಪತಿ ಹಾಗೂ ಮಗ, ಮಗಳು ಜೊತೆಗೆ ಕುಟುಂಬವೇ ನನ್ನ ಪ್ರಪಂಚ” ಎಂದು ಧನಲಕ್ಷ್ಮಿ ಪಾತ್ರದ ಬಗ್ಗೆ ಹೇಳುತ್ತಾರೆ ಯಮುನಾ ಶ್ರೀನಿಧಿ.

ಭರತನಾಟ್ಯ ಕಲಾವಿದೆಯಾಗಿರುವ ಯಮುನಾ ಶ್ರೀನಿಧಿ ಅಶ್ವಿನಿ ನಕ್ಷತ್ರ ಮೂಲಕ ನಟನೆಗೆ ಕಾಲಿಟ್ಟರು. ಮುಂದೆ ಅಮೃತವರ್ಷಿಣಿ, ಒಂದೂರಲ್ಲಿ ರಾಜ ರಾಣಿ, ಮದುಮಗಳು, ಸಾಕ್ಷಿ, ಅರಮನೆ, ತ್ರಿವೇಣಿ ಸಂಗಮ, ಎರಡು ಕನಸು, ನಾಗಕನ್ನಿಕೆ, ಕಮಲಿ, ಮಾನಸ ಸರೋವರ, ಮನಸಾರೆ ಧಾರಾವಾಹಿಗಳಲ್ಲಿ ನಟಿಸಿರುವ ಇವರು ಸದ್ಯ ಕನ್ಯಾಕುಮಾರಿಯ ಧನಲಕ್ಷ್ಮಿ ಪಾತ್ರದಲ್ಲಿ ಬ್ಯುಸಿ.

ದಿಲ್ ರಂಗೀಲಾ ಸಿನಿಮಾ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಂಡಿರುವ ಯಮುನಾ ಮೆಲೋಡಿ, ರನ್ನ, ಶಿವಲಿಂಗ, ಚಕ್ರವ್ಯೂಹ, ಜಾಗ್ವಾರ್ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿರುವ ಇವರು ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಸಮರ ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ಕಿರುತೆರೆ ಹಿರಿತೆರೆಯ ಜೊತೆಗೆ ವೆಬ್ ಸಿರೀಸ್ ನಲ್ಲಿ ಕಮಾಲ್ ಮಾಡಿರುವ ಯಮುನಾ ಶ್ರಿನಿಧಿ ರಕ್ತಚಂದನ ಹಾಗೂ ಹಾಕೂನಾ ಮಟಾಟದಲ್ಲಿ ಅಭಿನಯಿಸಿದ್ದಾರೆ.

