ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕ ಧೃವಂತ್ ಆಗಿ ಅಭಿನಯಿಸಿರುವ ಚರಿತ್ ಬಾಳಪ್ಪ ಕಿರುತೆರೆಗೆ ಮರಳಿದ್ದಾರೆ. ಸಿರಿ ಕನ್ನಡ ಚಾನೆಲ್ ನಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ ಹೊಚ್ಚ ಹೊಸ ಧಾರಾವಾಹಿ W/o ಕೃಷ್ಣಮೂರ್ತಿ ಧಾರಾವಾಹಿಯಲ್ಲಿ ನಾಯಕ ಕೃಷ್ಣಮೂರ್ತಿ ಆಗಿ ಕೊಂಚ ಗ್ಯಾಪ್ ನ ನಂತರ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ ಚರಿತ್ ಬಾಳಪ್ಪ. ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕ ಧೃವಂತ್ ಆಗಿ ನಟಿಸಿದ್ದ ಚರಿತ್ ಮುಂದೆ ಕೊರೊನಾ ಕಾರಣದಿಂದಾಗಿ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದರು.

ಇದೀಗ ಕೊರೊನಾದ ಹಾವಳಿ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು ಮತ್ತೆ ಬಣ್ಣದ ಲೋಕದತ್ತ ಮರಳಿರುವ ಚರಿತ್ ಬಾಳಪ್ಪ ಇನ್ನು ಮುಂದೆ ಕೃಷ್ಣಮೂರ್ತಿಯಾಗಿ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಿದ್ದಾರೆ.

ಮೊದಲಿನಿಂದಲೂ ನಟನಾ ಜಗತ್ತಿನಿಂದ ವಿಶೇಷ ಒಲವು ಹೊಂದಿದ್ದ ಚರಿತ್ ಬಾಳಪ್ಪ ಎಂಬಿಎ ಪದವೀಧರ ಹೌದು. ಪದವಿಯ ನಂತರ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚರಿತ್ ಮುಂದೆ ವಿಮಾನದಲ್ಲಿ ಕ್ಯಾಬಿನ್ ಕ್ರ್ಯೂ ಆಗಿಯೂ ಕೆಲಸ ಮಾಡಿದ್ದರು. ಇಷ್ಟಾದರೂ ಬಣ್ಣದ ನಂಟು ಅವರನ್ನು ಬಿಟ್ಟಿರಲಿಲ್ಲ. ಅದೇ ಕಾರಣದಿಂದ ಬಿಡುವುದ್ದಾಗಲೆಲ್ಲಾ ಆಡಿಶನ್ ಗಳಿಗೆ ಹೋಗಲಾರಂಭಿಸಿದರು.

ವಿನು ಬಳಂಜ ನಿರ್ದೇಶನದ ಲವ್ ಲವಿಕೆ ಧಾರಾವಾಹಿಯಲ್ಲಿ ನಾಯಕ ಲಕ್ಷ್ಮಣ್ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಚರಿತ್ ಬಾಳಪ್ಪ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ವೀಕ್ಕಷರ ಮನ ಸೆಳೆದು ಬಿಟ್ಟಿದ್ದರು. ಮುಂದೆ ಅಮ್ಮ ನಿನಗಾಗಿ ಧಾರಾವಾಹಿಯಲ್ಲಿ ನಾಯಕನಾಗಿ ಮೋಡಿ ಮಾಡಿದ ಚರಿತ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಹ್ಯಾಂಡ್ ಸಮ್ ಹುಡುಗ ಹೌದು. ಸರ್ಪಸಂಬಂಧ ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದ ಚರಿತ್ ಮುಂದೆ ಮುದ್ದುಲಕ್ಷ್ಮಿಯ ಡಾಕ್ಟರ್ ಧೃವಂತ್ ಆಗಿ ಬದಲಾದರು‌.

ಮುದ್ದಾದ ನಟನೆಯ ಮೂಲಕ ವೀಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದ ಚರಿತ್ ಬಾಳಪ್ಪ ಕೋವಿಡ್ ಕಾರಣದಿಂದಾಗಿ ಧಾರಾವಾಹಿಯಿಂದ ಹೊರಬಂದುದು ವೀಕ್ಷಕರಿಗೆ ಕೊಂಚ ಬೇಸರ ತಂದಿತ್ತು. ಆದರೆ ನಂತರ ಅವರು ಮನಸಾರೆ ಧಾರಾವಾಹಿಯಲ್ಲಿ ರಾಮ್ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಮನಸಾರೆ ಧಾರಾವಾಹಿಯು ಕೂಡಾ ಮುಕ್ತಾಯಗೊಂಡ ಬಳಿಕ ಕಿರುತೆರೆಯಿಂದ ದೂರವಿದ್ದ ಚರಿತ್ ಇದೀಗ ಅವರು ಕೃಷ್ಣಮೂರ್ತಿ ಆಗಿ ಮರಳಿರುವುದು ಸಂತಸ ತಂದಿದೆ.

Share via
Copy link
Powered by Social Snap