ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ಅರಸ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗ ದರ್ಶಕ್ ಗೌಡ ಸದ್ಯ ಜರ್ನಲಿಸ್ಟ್ ಆಗಿ ಬದಲಾಗಿದ್ದಾರೆ. ಅರೇ! ದರ್ಶಕ್ ಗೌಡ ನಟನೆಯಿಂದ ಹೊರಬಂದ್ರಾ? ಅವರಿನ್ನು ಕಿರುತೆರೆಯಲ್ಲಿ ಕಾಣಿಸಿಕೊಳ್ಳೋದಿಲ್ವಾ? ಅಂಥ ಕನ್ ಫ್ಯೂಸ್ ಆಗಿದ್ದೀರಾ? ನಿಮ್ಮೆಲ್ಲಾ ಕನ್ ಫ್ಯೂಸ್ ಗಳಿಗೆ ಫುಲ್ ಸ್ಟಾಪ್ ಹಾಕುವ ಸಮಯ ಇದು. ಯಾಕೆಂದ್ರೆ ದರ್ಶಕ್ ಗೌಡ ಜರ್ನಲಿಸ್ಟ್ ಆಗಿ ಬದಲಾಗಿರುವುದೇನೋ ನಿಜ, ಆದರೆ ಅದು ಕೂಡಾ ಧಾರಾವಾಹಿಗಾಗಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಿರುವ ಹೊಚ್ಚ ಹೊಸ ಧಾರಾವಾಹಿ ಬೆಟ್ಟದ ಹೂ ವಿನಲ್ಲಿ ನಾಯಕ ರಾಹುಲ್ ಆಗಿ ಕಾಣಿಸಿಕೊಂಡಿರುವ ದರ್ಶಕ್ ಜರ್ನಲಿಸ್ಟ್ ಆಗಿ ಮೋಡಿ ಮಾಡಲಿದ್ದಾರೆ. ಮೊದಲಿನಿಂದಲೂ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ದರ್ಶಕ್ ಅವರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಆಲೋಚನೆ ಮಾಡಿರಲಿಲ್ಲ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪದ್ಮಾವತಿ ಧಾರಾವಾಹಿಯ ಪ್ರಸನ್ನ ಆಗಿ ಕಿರುತೆರೆಗೆ ಕಾಲಿಟ್ಟ ದರ್ಶಕ್ ಗೌಡ ಮೊದಲ ಧಾರಾವಾಹಿಯಲ್ಲಿ ನಟಿಸಿದ್ದು ಖಡಕ್ ವಿಲನ್ ಆಗಿ. ನಂತರ ತಮಿಳಿನ ಅರುಂಧತಿ ಯಲ್ಲಿ ನಟಿಸಿದ್ದ ದರ್ಶಕ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಣ್ಮಣಿ ಧಾರಾವಾಹಿಯಲ್ಲಿ ನಾಯಕರಾಗಿ ಕಮಾಲ್ ಮಾಡಿದ್ದರು.
ಇದೀಗ ಬೆಟ್ಟದ ಹೂ ಧಾರಾವಾಹಿಯಲ್ಲಿ ನಟಿಸುತ್ತಿರುವ ದರ್ಶಕ್ ಗೌಡ “ನನಗೆ ನಟನಾಗಬೇಕು ಎಂಬ ಬಯಕೆ ಮೊದಲಿನಿಂದಲೂ ಇತ್ತು. ಆದರೆ ಯಾವತ್ತಿಗೂ ದೊಡ್ಡ ನಾಯಕನಾಗಬೇಕು ಎಂಬ ಆಸೆಯಂತೂ ಖಂಡಿತಾ ಇರಲಿಲ್ಲ. ಬದಲಿಗೆ ಒಬ್ಬ ಉತ್ತಮ ಕಲಾವಿದ,ನಟನಾಗಿ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಇರಾದೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ, ಮುಂದೆಯೂ ಪಡುತ್ತೇನೆ. ಇನ್ನು ಕಷ್ಟಕರವಾಗಿರುವಂತಹ ಪಾತ್ರಕ್ಕೆ ಜೀವ ತುಂಬುವ ಅವಕಾಶ ದೊರೆತರೆ ನಟಿಸಲು ಸಿದ್ಧ” ಎನ್ನುತ್ತಾರೆ ದರ್ಶಕ್ ಗೌಡ.