ಗೌತಮಿ ಜಾಧವ್ … ಕಿರುತೆರೆ ವೀಕ್ಷಕರಿಗಂತೂ ತೀರಾ ಪರಿಚಿತ ಹೆಸರು ಹೌದು! ಸ್ವಪ್ನಕೃಷ್ಣ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸತ್ಯ ದಲ್ಲಿ ನಾಯಕಿ ಸತ್ಯ ಆಗಿ ನಟಿಸುತ್ತಿರುವ ಗೌತಮಿ ರಗಡ್ ಲುಕ್ ನಲ್ಲಿ ಮೋಡಿ ಮಾಡುತ್ತಿದ್ದಾರೆ. ವಿಭಿನ್ನ ಲುಕ್ ಮೂಲಕ ಕೇವಲ ಹೆಣ್ಣು ಮಕ್ಕಳ ಮಾತ್ರವಲ್ಲದೇ ಗಂಡು ಹೈಕ್ಕಳ ಮನ ಗೆದ್ದಿರುವ ಗೌತಮಿ ಲಾಂಗ್ ಗ್ಯಾಪ್ ನ ನಂತರ ಸತ್ಯ ಆಗಿ ಕಿರುತೆರೆಗೆ ಕಾಲಿಟ್ಟಿದ್ದರೂ ಧಾರಾವಾಹಿ ಆರಂಭವಾದ ದಿನದಿಂದಲೇ ವೀಕ್ಷಕರ ಮನ ಸೆಳೆದುಬಿಟ್ಟಿದ್ದರು. ಮಾತ್ರವಲ್ಲ ಸತ್ಯ ಧಾರಾವಾಹಿ ಕಿರುತೆರೆ ಜಗತ್ತಿನಲ್ಲಿ ಅದೆಷ್ಟು ಹವಾ ಸೃಷ್ಟಿ ಮಾಡಿತ್ತು ಎಂದರೆ ಶುರುವಾದ ಸಮಯದಲ್ಲಿ ಟಿ ಆರ್ ಪಿ ಯಲ್ಲಿಯೂ ಕೂಡಾ ಸಾಕಷ್ಟು ಸದ್ದು ಮಾಡಿತ್ತು.

ಇಂತಿಪ್ಪ ಸತ್ಯ ಆಲಿಯಾಸ್ ಗೌತಮಿ ಜಾಧವ್ ಕಿರುತೆರೆಯ ನಂತರ ಇದೀಗ ಕಿರುಚಿತ್ರದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ಹೊಸದೊಂದು ಕಿರುಚಿತ್ರವನ್ನು ನಿರ್ಮಿಸುತ್ತಿದ್ದು ಅದರಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಗೌತಮಿ ಜಾಧವ್.

ಪಪ್ಪೆಟ್ಸ್ ಎನ್ನುವ ಕಿರುಚಿತ್ರದಲ್ಲಿ ಗೌತಮಿ ಜಾಧವ್ ಬಣ್ಣ ಹಚ್ಚಲಿದ್ದು ಈ ಕಿರುಚಿತ್ರವನ್ನು ಸ್ವತಃ ಗೌತಮಿ ಜಾಧವ್ ಅವರ ಪತಿ, ಛಾಯಗ್ರಾಹಕ ಅಭಿಷೇಕ್ ಕಾಸರಗೋಡು ಅವರು ನಿರ್ದೇಶಿಸುತ್ತಿರುವುದು ವಿಶೇಷ. “ಮೊದಲ ಬಾರಿಗೆ ಕಿರುಚಿತ್ರದಲ್ಲಿ ನಟಿಸುತ್ತಿದ್ದೇನೆ. ನಟಿಯೊಬ್ಬಳು ಸೇಲ್ಸ್ ಗರ್ಲ್ ನಿಂದ ಪ್ರಭಾವಿತಕ್ಕೆ ಒಳಗಾಗುತ್ತಾಳೆ. ಆ ನಟಿಯ ಪಾತ್ರಕ್ಕೆ ನಾನು ಜೀವ ತುಂಬುತ್ತಿದ್ದೇನೆ‌. ಇಂತಹ ಸುವರ್ಣಾವಕಾಶ ಕೊಟ್ಟ ಸತ್ಯ ಹೆಗಡೆ ಅವರಿಗೆ ನಾನೆಷ್ಟು ಧನ್ಯವಾದ ಹೇಳಿದರೂ ಸಾಲದು” ಎನ್ನುತ್ತಾರೆ ಗೌತಮಿ ಜಾಧವ್.

ನಾಗಪಂಚಮಿ ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದಿದ್ದ ಗೌತಮಿ ಜಾಧವ್ ಫ್ಯಾಷನ್ ಡಿಸೈನಿಂಗ್ ನಲ್ಲಿ ಪದವಿ ಪಡೆದ ಚೆಲುವೆ. ಏನೇ ಹೊಸತಿರಲಿ ಅದನ್ನು ಕಲಿತೇ ಸಿದ್ಧ ಎನ್ನುವ ಈಕೆಯ ಕಣ್ಣಿಗೆ ಬಿದ್ದುದೇ ಜಿಮ್ನಾಸ್ಟಿಕ್. ಅಂತೆಯೇ ಅದನ್ನು ಕಲಿಯಲು ಹೋದ ಆಕೆಯ ಬದುಕನ್ನು ಅದೇ ಜಿಮ್ನಾಸ್ಟಿಕ್ ಬದಲಿಸುತ್ತದೆ ಎಂದು ಆಕೆ ಅಂದುಕೊಂಡಿರಲಿಲ್ಲ.

ಜಿಮ್ನಾಸ್ಟಿಕ್ ಕಲಿಯಲು ಬರುತ್ತಿದ್ದ ನಟ ನಟಿಯರನ್ನು ನೋಡಿದಾಗ ನಾನು ನಟಿಯಾಗಿರುತ್ತಿದ್ದರೆ ಎಂಬ ಆಲೋಚನೆ ಅವರಲ್ಲಿ ಮೂಡುತ್ತಿತ್ತು‌. ಆಶ್ಚರ್ಯ ಎಂದರೆ ಅದು ಬಹುಬೇಗನೇ ಕಾರ್ಯರೂಪಕ್ಕೂ ಬಂದು ಬಿಟ್ಟಿತ್ತು!

ನಾಗಪಂಚಮಿ ನಂತರ ಹಿರಿತೆರೆಗೆ ಹಾರಿದ ಗೌತಮಿ ಜಾಧವ್ ಲೂಟಿ, ಆದ್ಯಾ, ಕಿನಾರೆ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು‌. ಮುಂದೆ ತಮಿಳು ಸಿನಿಮಾವೊಂದರಲ್ಲಿ ನಟಿಸಿದ್ದ ಈಕೆ ಸತ್ಯ ಆಗಿ ಕಿರುತೆರೆಗೆ ಕಂ ಬ್ಯಾಕ್ ಆದರು‌. ಸದ್ಯ ಸತ್ಯ ಆಗಿ ಕರ್ನಾಟಕದಾದ್ಯಂತ ಸದ್ದು ಮಾಡುತ್ತಿರುವ ಈಕೆಯ ಬಣ್ಣದ ಪಯಣ ಕಲರ್ ಫುಲ್ ಆಗಿ ಸಾಗಲಿ ಎಂದು ಹಾರೈಸೋಣ.

Share via
Copy link
Powered by Social Snap