ಬಾಡಿ ಶೇಮಿಂಗ್ ಅಥವಾ ದೇಹದ ಬಗೆಗಿನ ಕೀಳರಿಮೆಯಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಹೊರತಾಗಿಲ್ಲ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಹೊರಪ್ರಪಂಚದಲ್ಲಿ ದೊಡ್ಡದೊಂದು ಮಾರುಕಟ್ಟೆ, ಲಾಭ ನಷ್ಟಗಳ ಎಣಿಕೆಯ ಜಾಲ ಕೂಡಾ ವ್ಯಾಪಿಸಿದೆ. ಈಗ ನಟಿಯರೂ ಬಾಡಿ ಶೇಮಿಂಗ್ ಕುರಿತು ದನಿಯೆತ್ತುತ್ತಿದ್ದು, ಅವಿಕಾ ಗೋರ್ ಕೂಡಾ ತಮ್ಮ ದೇಹದ ಬಗ್ಗೆ ತಾವು ಅನುಭವಿಸಿದ್ದ ಕೀಳರಿಮೆಯ ಕರಾಳ ಅನುಭವಗಳನ್ನು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅವಿಕಾ ಗೋರ್ ಹಿಂದಿಯಲ್ಲಿ ತೆರೆ ಕಂಡ “ಬಾಲಿಕಾ ವಧು” ಸೀರಿಯಲ್‌ ಮೂಲಕ ಮನೆಮಾತಾಗಿದ್ದರು. ಇದರಲ್ಲಿ ಬಾಲಿಕಾ ವಧು ಆಗಿ ಅಭಿನಯಿಸಿದ ಅವಿಕಾ ಗೋರ್ ಅವರಂತೂ ಮತ್ತೆ ಹಿಂದಿರುಗಿ ನೋಡಿದ್ದಿಲ್ಲ. ಆದರೆ ಅವಿಕಾ ತಮ್ಮ ದೇಹದ ಬಗ್ಗೆ ಒಂದು ರೀತಿಯ ಮುಜುಗರ ಭಾವವನ್ನು ಬೆಳೆಸಿಕೊಂಡಿದ್ದರು. ಹಾಗಾಗಿ ಅವರು ಸರಿಯಾದ ಪೋಷಣೆಯನ್ನು ಮಾಡದೇ ದೇಹದ ಕಾಳಜಿಗೆ ಗಮನ ಹರಿಸದೇ ವರ್ತಿಸಿದ್ದರು. ಈ ಕಾರಣದಿಂದ ಅವರು ದೇಹ ತೂಕವನ್ನು ಇನ್ನಿಲ್ಲದಂತೆ ಹೆಚ್ಚಿಸಿಕೊಂಡಿದ್ದರು.

“ನಾನು ನನ್ನನೇ ತುಂಬಾ ದ್ವೇಷಿಸುತ್ತಿದ್ದೆ. ನಾನು ಹೇಗೆ ಕಾಣಿಸುತ್ತಿದ್ದೇನೆ ಎಂಬುದು ಮುಖ್ಯವಾಗಿರಲಿಲ್ಲ ಹೀಗಾಗಿ ನಟನೆ ಬಗ್ಗೆ ಗಮನ ಹರಿಸುತ್ತಿದ್ದೆ. ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳುವುದಕ್ಕೂ ಇಷ್ಟವಿರಲಿಲ್ಲ. ನನಗೆ ನೆಗೆಟಿವ್ ಫೀಲಿಂಗ್ ಬರುತ್ತಿತ್ತು. ನಾನು ಒಂದು ದಿನ ಮುನ್ನವೇ ಕಾಸ್ಟ್ಯೂಮ್ಸ್ ಟ್ರಯಲ್ ಮಾಡುತ್ತಿದ್ದೆ.” ಎಂದು ಹೇಳಿದ್ದಾರೆ. ಜನರ ಬಳಿ ತನ್ನ ಅಭಿನಯದ ಬಗ್ಗೆ ಅಭಿಪ್ರಾಯ ಕೇಳಿದಾಗಲೂ ಅವರು ಅಭಿನಯವನ್ನು ಮೆಚ್ಚಿಕೊಂಡಿದ್ದು ತಿಳಿದು ಬಂತು. ಹಾಗಾಗಿ ದೇಹಪ್ರಕೃತಿಯ ಬಗ್ಗೆ ಹೆಚ್ಚಿನ ಗಮನ ನೀಡದೇ ಕೆಲಸದ ಕಡೆ ಗಮನ ಹರಿಸಿದ್ದಾಗಿ ಹೇಳಿದ್ದಾರೆ.

ತದನಂತರ ನಟಿಯನ್ನು ಹಲವಾರು ಅವಕಾಶಗಳು ಅರಸಿ ಬಂದಿದ್ದು, ಈಗ ದೇಹದ ತೂಕವನ್ನು ಇಳಿಸಿಕೊಂಡು ಸ್ಲಿಮ್‌ ಆಗಿ, ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಯಟ್ ಹಾಗೂ ಫಿಟ್‌ನೆಸ್‌ಗೆ ಹೆಚ್ಚಿನ ಒತ್ತನ್ನು ಕೊಡುತ್ತಿದ್ದಾರೆ.

ಬಾಲಿಕಾ ವಧು ಹಿಂದಿ ಮತ್ತು ತೆಲುಗು ಅವತರಣಿಕೆಯಲ್ಲಿ ಅವಿಕಾ ಗೋರ್ ನಟಿಸಿದ್ದಾರೆ. ‘ಲಕ್ಷ್ಮೀ ರಾವೆ ಮಾ ಇಂಟಿಕಿ’, ‘ಉಯ್ಯಲಾ ಜಂಪಾಲಾ’, ‘ಎಕ್ಕಡಿಕಿ ಪೋತವು ಚಿನ್ನವಾಡ’, ರಾಜು ಗಾರಿ ಗಾಡಿ 3′ ಸೇರಿದಂತೆ ಹಲವು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಹಿಂದಿಯ ಒಂದಷ್ಟು ಸಿನಿಮಾಗಳಲ್ಲೂ ಕೂಡ ನಟಿ ಅವಿಕಾ ಅಭಿನಯಿಸಿರುವ ಅವಿಕಾ ರಿಯಾಲಿಟಿ ಶೋಗಳ ಭಾಗವೂ ಆಗಿದ್ದರು.

Share via
Copy link
Powered by Social Snap