ಒಬ್ಬ ಸೆಲೆಬ್ರಿಟಿ ಅಥವಾ ಸಿನಿಮಾ ಸ್ಟಾರ್ ನ ಹುಟ್ಟಿದ ದಿನ ಅಂದರೆ ಅದೆಷ್ಟು ಸಂಭ್ರಮ, ಸಡಗರ. ದೂರದೂರುಗಳಿಂದ ಅಭಿಮಾನದ ಮಹಾಸಾಗರವನ್ನೇ ಹೊತ್ತುಬರುವ ಅಸಂಖ್ಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನುಮದಿನವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ನಟ-ನಟಿಯರು ಕೂಡ ಹಾಗೇ, ತಮ್ಮ ಅಭಿಮಾನಿಗಳ ಜೊತೆ ಸಡಗರದಿಂದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಾರೆ. ಆದರೆ ಈಗ ಕನ್ನಡದ ಬಹುಪಾಲು ನಟರು ತಮ್ಮ ಜನುಮದಾಚರಣೆಗೆ ಕಡಿವಾಣ ಹಾಕಿಕೊಂಡಿದ್ದಾರೆ. ಎಲ್ಲರದ್ದೂ ಒಂದೇ ಕಾರಣ. ಕರುನಾಡ ಯುವರತ್ನ ಅಪ್ಪು ನಮ್ಮನ್ನ ಅಗಲಿದ್ದು. ಸದ್ಯ ಈ ಸಾಲಿಗೆ ನವರಸ ನಾಯಕ ಜಗ್ಗೇಶ್ ಸೇರಿದ್ದಾರೆ.
ವಿಶೇಷವೆಂದರೆ ಜಗ್ಗೇಶ್ ಅವರು ಹಾಗು ಪುನೀತ್ ರಾಜಕುಮಾರ್ ಅವರು ಇಬ್ಬರೂ ಹುಟ್ಟಿದ್ದು ಒಂದೇ ದಿನ, ಮಾರ್ಚ್ 17. ಪ್ರತಿವರ್ಷ ಬೇರೆ ಬೇರೆ ದಿಕ್ಕುಗಳಿಂದ ಅಭಿಮಾನಿಗಳು ಬಂದು ಇವರಿಬ್ಬರ ಜನ್ಮದಿನಕ್ಕೆ ಶುಭಕೋರುತ್ತಿದ್ದರು. ಆಚರಿಸುವಾಗ ಪುನೀತ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಜೈಕಾರ, ಶುಭಾಶಯಗಳನ್ನ ಹೇಳಿ ಅವರನ್ನ ನೆನೆದೇ ಅಪ್ಪು ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದರು. ಜಗ್ಗೇಶ್ ಅಭಿಮಾನಿಗಳು ಸಹ ಪುನೀತ್ ಗೆ ಜನುಮದಿನದ ಶುಭಕೋರಿಯೆ ಮುಂದುವರೆಯುತ್ತಿದ್ದದ್ದು. ಆದರೆ ಈಗ ಅದ್ಯಾವ್ದು ನಡೆಯುವುದಿಲ್ಲ. ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ನಲ್ಲೂ ಇದನ್ನೇ ಹೇಳಿಕೊಂಡಿದ್ದಾರೆ.
“ಈ ಬಾರಿ ನನ್ನ 59ನೇ ಜನ್ಮದಿನವನ್ನ ಆಚರಿಸಿಕೊಳ್ಳುವುದಿಲ್ಲ. ಆಚರಿಸೋ ಮನಸ್ಸೂ ಇಲ್ಲ. ಕಾರಣ ಇಷ್ಟು ವರ್ಷ ತಪ್ಪದೆ ಬರುತ್ತಿದ್ದ ಪುನೀತನ ಕರೆ,’ಅಣ್ಣ happy birthday’ ಎಂದು. ಮುಂದೆಂದೂ ಬರದಂತಾಯಿತು. ಪುನೀತನ ಜೊತೆಗೆ ಕೊನೆಯ ಚಿತ್ರ” ಎಂದು ಬರೆದುಕೊಂಡು, ಅಪ್ಪುವಿನ ಜೊತೆಗಿನ ತಮ್ಮ ಕೊನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 17ರಂದು ಕರ್ನಾಟಕದಾದ್ಯಂತ ಜಾತ್ರೆಯ ಸಂಭ್ರಮದಲ್ಲಿ ಅಪ್ಪುವನ್ನ ಅಭಿಮಾನಿಗಳು ನೆನೆಯೋ ಸಾಧ್ಯತೆಗಳಿವೆ. ಅಲ್ಲದೇ ಇದೇ ದಿನ ಅಪ್ಪುವಿನ ಕೊನೆಯ ಚಿತ್ರ ‘ಜೇಮ್ಸ್’ ಕೂಡ ಬಿಡುಗಡೆಗೊಳ್ಳಲಿದೆ.