ಸ್ಯಾಂಡಲ್ ವುಡ್ ನಲ್ಲಿ ಸ್ವತಂತ್ರ್ಯ ಪೂರ್ವದ ಕಥೆಗಳು ಸಿನಿಮಾಗಳಾಗುವುದು ಇತ್ತೀಚಿನ ದಿನಗಳಲ್ಲಿ ಅತಿ ವಿರಳ. ಅದರಲ್ಲೂ ಕಾದಂಬರಿ ಆಧಾರಿತ ಸಿನಿಮಾಗಳು ಸಿಗುವುದು ಅಪರೂಪ.
ಕಾದಂಬರಿ ಆಧಾರಿತ ಸ್ವತಂತ್ರ್ಯ ಪೂರ್ವದ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಸಿನಿಮಾದ ಹೆಸರು ಭುಗಿಲು. ಇದೊಂದು ಕಾಡ ಸೆರಗಿನ ಸೂಡಿ ಎಂಬ ಕಾದಂಬರಿಯನ್ನು ಆಧರಿಸಿದ ಸಿನಿಮಾ. ಈ ಕಾದಂಬರಿಯನ್ನು ಮಂಜುನಾಥ್ ಚಾಂದ್ ಅವರು ಬರೆದಿದ್ದಾರೆ.
ಈ ಸಿನಿಮಾವನ್ನು ಚಂದ್ರಕಾಂತ್ ಕೊಡಪಾಡಿ ಅವರು ನಿರ್ದೇಶನ ಮಾಡಿದ್ದಾರೆ. ಇದೊಂದು ಪಿರಿಯಾಡಿಕಲ್ ಸಿನಿಮಾ.. 1935 ರ ಚಿತ್ರಣವನ್ನು ನೀಡಲಾಗಿದೆ. ಕುಂದಾಪುರದ ಬೈಂದೂರು ಸುತ್ತಮುತ್ತಲ ಕಥೆಯನ್ನು ತೋರಿಸಲಾಗಿದೆ.
ಭುಗಿಲು ಸಿನಿಮಾ ಚಂದ್ರಕಾಂತ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಈ ಸಿನಿಮಾದಲ್ಲಿ ಬ್ರಿಟೀಶ್ ಅಧಿಕಾರಿಯ ಪಾತ್ರದಲ್ಲಿ ಹಾಲೆಂಡಿನ ನಟ ಗ್ರಾವಿಕ್ಸಿ ನಟಿಸಿದ್ದಾರೆ.
ಈ ಕಾದಂಬರಿ ಕುಂದಾಪುರ ಕನ್ನಡದಲ್ಲಿ ಇದೆ. ಕುಂದಾಪುರ ಕನ್ನಡವನ್ನು ಮಾತಾಡುವವರನ್ನು ಆಯ್ಕೆ ಮಾಡಬೇಕಾದದ್ದರಿಂದ ಬಹುತೇಕ ಸ್ಥಳೀಯ ಹೊಸ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಬೈಂದೂರಿನಿಂದ 10km ದೂರದಲ್ಲಿ ಬುಡಕಟ್ಟು ಜನಾಂಗ ವಾಸವಿರುವ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕ ಚಂದ್ರಕಾಂತ್ ಕೊಡಪಾಡಿ ಹೇಳಿದ್ದಾರೆ.