ರಾಜ್ಯಾದ್ಯಂತ ಇಂದು(ಮಾರ್ಚ್ 17) ಹಬ್ಬವನ್ನೇ ಆಚರಿಸುತ್ತಿರೋ ಪ್ರತಿಯೊಬ್ಬ ಅಪ್ಪು ಅಭಿಮಾನಿಗೂ ಹೊಸತೊಂದು ಸಿಹಿವಿಚಾರ ಕಾಯುತ್ತಿದೆ. ‘ಜೇಮ್ಸ್’ ಚಿತ್ರಕ್ಕೆ ಎಲ್ಲೆಡೆ ಭರಪೂರ ಸ್ವಾಗತ ಸಿಗುತ್ತಿದೆ. ಅದ್ದೂರಿಯಾಗಿ ‘ಜೇಮ್ಸ್’ ಜೊತೆಗೆ ಅಪ್ಪುವಿನ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು, ಅಪ್ಪುವನ್ನ ಬೆಳ್ಳಿತೆರೆ ಮೇಲೆ ಕಂಡು ಸಂತುಷ್ಟರಾಗಿದ್ದಾರೆ. ಈಗ ಈ ಸಂತಸಕ್ಕೆ ಹೊಸತೊಂದು ಸೇರ್ಪಡೆಯನ್ನ ಮಾನ್ಯಮುಖ್ಯಮಂತ್ರಿಗಳು ಮಾಡಿದ್ದಾರೆ.

ನಮಗೆಲ್ಲ ಗೊತ್ತಿರುವ ಹಾಗೆಯೇ, ಕರ್ನಾಟಕ ಸರ್ಕಾರ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕನ್ನಡ ನಾಡಿನ ಪ್ರಜೆಗೆ ಸರ್ಕಾರದಿಂದ ಸಿಗಬಹುದಾದಂತ ಅತ್ಯಂತ ಹಿರಿಮೆಯ ಗೌರವ ‘ಕರ್ನಾಟಕ ರತ್ನ’ವನ್ನು ನೀಡಿ ಸನ್ಮಾನಿಸಲು ನಿರ್ಧಾರ ಮಾಡಿತ್ತು. ಈಗ ಆ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ಅತಿ ಶೀಘ್ರದಲ್ಲೇ ಅಪ್ಪುವಿಗೆ ಸಕಲ ಮರ್ಯಾದೆಗಳಿಂದ ‘ಕರ್ನಾಟಕ ರತ್ನ’ ನೀಡಲಿದ್ದಾರಂತೆ. ಇನ್ನು ಖಾತ್ರಿಯಾಗದ ದಿನಾಂಕವನ್ನ ಇಡಲೆಂದೆ ಸಮಿತಿಯೊಂದನ್ನ ಸೃಷ್ಟಿಸಲಿದ್ದಾರಂತೆ. ರಾಜ್ ಕುಟುಂಬದ ಜೊತೆಗೆ ಮಾತನಾಡಿ ಚಿಂತನೆ ನಡೆಸಿ ಆ ಕುಟುಂಬದ ಗೌರವ ಇಮ್ಮಡಿಯಾಗುವಂತ ಕಾರ್ಯಕ್ರಮವೊಂದನ್ನ ಮಾಡಲಾಗುವುದು ಎಂದಿದ್ದಾರೆ.

ಈಗಾಗಲೇ ಮೈಸೂರು ವಿಶ್ವವಿದ್ಯಾಲಯ ಅಪ್ಪುವಿನ ಸಿನಿಮಾ ಹಾಗು ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಮರಣೋತ್ತರ ‘ಡಾಕ್ಟರೇಟ್’ ಪದವಿ ನೀಡಿ ಗೌರವಿಸುವುದಾಗಿ ವಿವಿಯ ಕುಲಪತಿಗಳಾದ ಪ್ರೊ ಹೇಮಂತ್ ಕುಮಾರ್ ಅವರು ಹೇಳಿದ್ದು, ಇದೇ ಮಾರ್ಚ್ 22ರಂದು ನಡೆಯಲಿರುವ 102ನೇ ಘಟಿಕೋತ್ಸವದಲ್ಲಿ ಅಪ್ಪುವನ್ನ ‘ಡಾಕ್ಟರೇಟ್’ ಪದವಿಯಿಂದ ಗೌರವಿಸಲಾಗುವುದು.

Share via
Copy link
Powered by Social Snap